Breaking News
Home / ಇತ್ತೀಚಿನ ಸುದ್ದಿಗಳು / ಹುಡುಗಿಯರ ಕನಸೂ..ತುಳಸಿ ಕಟ್ಟೆಯೂ..!

ಹುಡುಗಿಯರ ಕನಸೂ..ತುಳಸಿ ಕಟ್ಟೆಯೂ..!

ಸಾವಿರಾರು ವರ್ಷಗಳಿಂದ ಕೃತಕ ಗೌರವದ ಗೋರಿಯಲ್ಲಿ ಹೂತು ಹೋಗಿರುವ ಹೆಣ್ಣು ಇಂದಿನ ಹೈಟೆಕ್ ಯುಗದಲ್ಲೂ ಡಿಜಿಟಲೈಸ್ ಆಗಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಅದೇನೋ ಗೊತ್ತಿಲ್ಲ ಅನೇಕರಿಗೆ ಹೆಣ್ಣು, ಮಗಳು, ಹುಡುಗಿ, ಮಹಿಳೆ ಎಂದ ತಕ್ಷಣ ಅದೊಂದು ತೆರನಾದ ಅನಾವಶ್ಯಕ ಗೊಂದಲ, ಕಾಳಜಿ, ಸಿಟ್ಟು, ಪುರುಷತ್ವ ಒಟ್ಟಿಗೆ ಬಂದು ಊಟೆಯೊಡೆಯುತ್ತದೆ..!

ಸಂವಿಧಾನದ ನಿಯಮಗಳಿಗಿಂತ ಹುಡುಗಿಯರ ಮೇಲಿರುವ ಕಾಲಂ ಗಳೇ ಜಾಸ್ತಿ. ನಮಗೆ ರಾತ್ರಿಗಳು ನಿಷಿದ್ಧ! ನಮ್ಮ ಮಾತು, ನೋಟ, ಉಡುಗೆ ತೊಡುಗೆ ಮೇಲೆ ಸುತ್ತಲಿನ ಪ್ರಪಂಚ ಒಂದು ಎಕ್ಸ್‍ಟ್ರಾ ಕಣ್ಣನ್ನು ಇಟ್ಟುಕೊಂಡೇ ನೋಡುತ್ತದೆ. ಎಷ್ಟು ಹೇರಿದರೂ ಮುಗಿಯದ ಎಲ್ಲಾ ಕಾನೂನುಗಳು, ಸಂಪ್ರದಾಯಗಳ ಕಾಂಟ್ರಾಕ್ಟು ಸಿಕ್ಕಿರುವುದು ಮಹಿಳೆಯರಿಗೇ..!

ಭಾರತದ ಸಂಸ್ಕøತಿಯ ಜವಬ್ದಾರಿ ಹೊತ್ತುಕೊಳ್ಳುವುದು ನಮ್ಮ ಮೇಲಿನ ಅಲಿಖಿತ ನಿಯಮ. ಮಹಿಳೆಯು ಉಡುವ ಸೀರೆಯಲ್ಲಿ ಅದೆಂಥಾ ಸಂಸ್ಕøತಿ ಅಡಕವಾಗಿದೆ ಎಂದು ಇಂದಿಗೂ ನಂಗೆ ಅರ್ಥವಾಗಿಲ್ಲ. ಸೀರೆ ಬಿಟ್ಟು ಬೇರೆ ಉಟ್ಟರೆ ಹುಡುಗಿಗೆ ಸಂಸ್ಕಾರವಿಲ್ಲ ಅಂತಾರೆ ಇಂದಿನ ಪ್ಯಾಂಟು ಷರ್ಟುಧಾರಿಗಳು.!

ಖೊಟ್ಟಿ ನಂಬಿಕೆಗಳ ದಾಸರಾಗಿರುವ ನಾವು ಎಲ್ಲದಕ್ಕೂ ಲೇಡೀಸ್ ಫಸ್ಟ್, ಲೇಡಿಸ್ ಫಸ್ಟ್ ಎಂದು
ಬೊಬ್ಬೆಯಾಕುತ್ತೇವೆ ಆದರೆ, ನಮ್ಮದೇ ಮನೆಯಲ್ಲಿ ಪ್ರತಿದಿನ ಎಲ್ಲರಿಗೂ ಊಟಬಡಿಸಿ ತಾನು ಕೊನೆಗೆ ಊಟಮಾಡುವ ಅಮ್ಮ ನಮಗೆ ಅಮ್ಮನಾಗಿ ಕಾಣುತ್ತಾಳೆಯೇ ಹೊರತು, ಅವಳೂ ಮನುಷ್ಯಳು ಅಂತ ಅನಿಸುವುದೇ ಇಲ್ಲ. ಮನೆಯ ಗಂಡು ಮಕ್ಕಳನ್ನು ತಿದ್ದದೆ, ಎಲ್ಲದಕ್ಕೂ ಮಹಿಳೆಯರೇ ಕಾರಣ ಎಂದು ಗೊಣಗುವ ಈ ಕಲಿಯುಗದ ಕಹಾನಿ ಮುಗಿಯುವಂತೆ ತೋರುವುದಿಲ್ಲ…

ಬಹುಜನರ ಪಾಲಿಗೆ ಹೆಣ್ಣು ಭೋಗದ ಸರಕಾಗಿದ್ದಾಳೆ. ದೇವತೆಯನ್ನು ಪೂಜಿಸುವ ಕೈಗಳು ಮನೆಯ ಕೈ ಬಳೆಯ ಸದ್ದಿಗೆ ಕಿವಿಗೊಡುವುದೇ ಇಲ್ಲ..! ಇಂದಿಗೂ ಎಷ್ಟೋ ಹುಡುಗಿಯರು ಶಿಕ್ಷಣದಿಂದ ದೂರವಿದ್ದಾರೆ, ಅವರ ಕನಸು, ಕನವರಿಕೆ ಮನೆಯ ತುಳಸೀ ಕಟ್ಟೆಯನ್ನೇ ಗಿರಕಿ ಹೊಡೆಯುತ್ತವೆ. ಕಲ್ಪನಾ ಚಾವ್ಲಾರಂತಹ ಧೀರ ಮಹಿಳೆಯರಿದ್ದರೂ ತಮ್ಮನ್ನು ತಾವು ಸಾಬೀತು ಪಡಿಸಲು ಎಲ್ಲ್ರಿಗೂ ಒಂದು ಅವಕಾಶ ಬೇಕಲ್ಲವೇ? ಓದು, ಕ್ರೀಡೆ, ಉದ್ಯೋಗ ಎಲ್ಲದರಲ್ಲೂ ಕೆಲವರ ಒಪ್ಪಿಗೆಯನ್ನು ಆಕೆ
ಪಡೆಯಬೇಕಾಗುತ್ತದೆ..

ಹರಿಯುವ ನೀರಿಗೆ ಅಪ್ಪಣೆ ಕೊಡಲು ನಮ್ಮಲ್ಲೂ ಸುಮಾರು ದೊಣ್ಣೆ ನಾಯಕರುಗಳಿದ್ದಾರೆ..ದುರಾದೃಷ್ಟವೆಂದರೆ ಕೆಲವರಿಗೆ ಆ ಒಪ್ಪಿಗೆಯೂ ಸಿಕ್ಕಲ್ಲ.! ಸರಿಯಾಗಿ ಗಮನಿಸಿ ನೋಡಿದರೆ ನಮ್ಮ ಪ್ರತಿಯೊಂದು ರೂಢಿಗತ ಅಭ್ಯಾಸಗಳು ಗಂಡು ಮತ್ತು ಹೆಣ್ಣಿನ ನಡುವೆ ಅಸಮಾನತೆಯನ್ನ ಮೂಡಿಸುವ ಮತ್ತು ಅದನ್ನು ನೆನಪಿಸುವ ಧಾಟಿಯಲ್ಲೇ ಇವೆ. ಗಂಡು ಹೆಣ್ಣು ಇಬ್ಬರೂ ಕೆಲಸಕ್ಕೆ ಹೋದರೂ ಮನೆಗೆಲಸವನ್ನು ಹೆಣ್ಣೇ ಮಾಡಬೇಕು ಆಕೆಗಿಲ್ಲದ ಸುಸ್ತು, ಒತ್ತಡ ಆತನಿಗಿರುತ್ತದೆ.!

ಈ ಕೆಟ್ಟ ವ್ಯವಸ್ಥೆಯಲ್ಲಿ ಆಕೆಯ ಸ್ವಾಭಿಮಾನ ಸಿಟ್ಟಿಗೆದ್ದರೆ ಅದಕ್ಕೆ ಅಹಂಕಾರವೆಂಬ ಪಟ್ಟಿಹಚ್ಚಿ ಮೂಗು ಮುರಿಯುತ್ತಾರೆ. ಎಲ್ಲಾ ರಂಗದಲ್ಲೂ ಉನ್ನತಿ ಕಂಡುಕೊಂಡ ನಾವು ನಮ್ಮ ಮನೆಯಲ್ಲೇ ಆಗುವ ಈ ಶೋಷಣೆ ಬಗ್ಗೆ ಮಾತನಾಡುವುದೇ ಇಲ್ಲ ಮತ್ತು ಅದು ಶೋಷಣೆ ಅಂತ ಬಹಳ ಜನಗಳಿಗೆ ಅನಿಸುವುದೇ ಇಲ್ಲ. ಏಕೆಂದರೇ ಅದು ಅವಳದ್ದೇ ಕೆಲಸ..ಅವಳು ಅಮ್ಮ..ಹೆಂಡತಿ..ಮಗಳು..ಅಕ್ಕ ಮತ್ತು ತಂಗಿ…

ನಂದಿನಿ ಕೆ.ಎಂ
ಎಂ.ಎ.ಪತ್ರಿಕೋದ್ಯಮ
ದಾವಣಗೆರೆ ವಿ.ವಿ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *