Breaking News
Home / ಇತ್ತೀಚಿನ ಸುದ್ದಿಗಳು / ಧರ್ಮ ಧರ್ಮಗಳ ನಡುವೆ ಕಿಡಿಯಲ್ಲಿ ಚಳಿ ಕಾಯಿಸಿಕೊಳ್ಳುವವರ ಬಗ್ಗೆ..!

ಧರ್ಮ ಧರ್ಮಗಳ ನಡುವೆ ಕಿಡಿಯಲ್ಲಿ ಚಳಿ ಕಾಯಿಸಿಕೊಳ್ಳುವವರ ಬಗ್ಗೆ..!

ಸದ್ಯ ನಮ್ಮ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸಂಘರ್ಷದ ಕಿಡಿ ಹಚ್ಚಿ ತಮ್ಮ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಳ್ಳುವ ಹಳೆಯ ಚಾಳಿ ರಾಜಕೀಯ ಸಂಘಟನೆಗಳಲ್ಲಿ ಮತ್ತೆ ಮುಂದುವರಿದಿದೆ. ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ದಿನಪೂರ್ತಿ ಅದೇ ಸುದ್ದಿ, ಸಂಘಟನೆಗಳ ನಾಯಕರಿಗೆ ಇಂಥ ಸಂಧರ್ಭದಲ್ಲಿ ತಮ್ಮ ಲಾಭ ಮಾಡಿಕೊಳ್ಳುವ ಧಾವಂತ, ಸಹ್ಯ ಪರಿಮಿಧಿಯನ್ನು ಮೀರಿ ಈ ಘಟನೆಗಳಿಗೆ ನಮ್ಮ ಕರಾವಳಿ ಸಾಕ್ಷಿ ಆಗುತ್ತಿದೆ.

ಒಬ್ಬ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿ ಹೂವು ಮಾರುವ ಜಯರಾಮಶೆಟ್ಟರಿಗೆ ಯಾವುದೇ ಮುಸ್ಲಿಮರ ಮೇಲೆ ದ್ವೇಷವಿಲ್ಲ,ಸಿಟ್ಟಾಗಲಿ, ಅಸಹನೆಯಾಗಲಿ ಇಲ್ಲ, ಆಟೋ ಓಡಿಸುವ ಜಲೀಲ್ ಗೆ ಯಾವ ಹಿಂದೂ ವ್ಯಕ್ತಿಯ ಮೇಲು, ಹಿಂದೂ ಆಚರಣೆಗಳ ಬಗ್ಗೆಯೂ ಆಕ್ಷೇಪ ಇಲ್ಲ. ಹೂ ಮಾರಿ ಮನೆಯ ಜವಾಬ್ದಾರಿ, ಆಟೋ ಓಡಿಸಿ ಮಕ್ಕಳನ್ನು ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎನ್ನುವ ಇವರಿಬ್ಬರು ನಮ್ಮಂತೆ, ನಿಮ್ಮಂತೆ ಜನಸಾಮಾನ್ಯರು. ನೂರರರಲ್ಲಿ 95 ಜನಕ್ಕೆ ಯಾವ ಧರ್ಮದ ಬಗ್ಗೆ, ಧರ್ಮದ ಜನರ ಬಗ್ಗೆ ವಿರೋಧ ಭಾವನೆ ಇರುವುದಿಲ್ಲ. ಅವರ ದಿನ ನಿತ್ಯದ ಜೀವನ ಅವರಿಗೆ ಮುಖ್ಯ,ಅವರ ಕುಟುಂಬ ಮುಖ್ಯ, ಧರ್ಮದ ಹೆಸರಿನಲ್ಲೋ, ಜಾತಿಯ ಹೆಸರಿನಲ್ಲೋ ಒಂದೋ ಎರಡೂ ದಿನ ಬಂದ್ ಆದರೆ ನಷ್ಟ ಆಗುವುದು ದಿನ ನಿತ್ಯ ದುಡಿಯುವ ಜಯರಾಮ ಶೆಟ್ಟರು ಹಾಗು ಜಲೀಲಗೋ ಹೊರತು ಯಾವ ಸಂಘಟನೆ, ರಾಜಕೀಯ ನಾಯಕರಿಗೂ ಅಲ್ಲ. ಮಕ್ಕಳ ಸ್ಕೂಲ್ ಫೀ ಕಟ್ಟುವಾಗ ಯಾವ ರಾಜಕೀಯ ಪಕ್ಷವು ಬಂದು ಜೊತೆ ನಿಲ್ಲುವುದಿಲ್ಲ, ಮಗಳ ಮದುವೆಗೆ ಹಣ ಹೊಂದಿಸುವಾಗ ಯಾವ ಸಂಘಟನೆಯು ಬಂದು ಸಹಾಯ ಮಾಡುವುದಿಲ್ಲ.

ಹಾಗಾದರೆ ನಮ್ಮ ರಾಜ್ಯದಲ್ಲಿ ಕೋಮುಭಾವನೆ ಕೆರಳುತ್ತಿರುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಇತ್ತೀಚಿಗೆ ರಾಜ್ಯದಲ್ಲಿ ನಡೆಯುತ್ತಿರುವ ಹತ್ಯೆಗಳು ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಆ ಹತ್ಯೆಗಳನ್ನು ತಮ್ಮ ತಮ್ಮ ಲಾಭಕ್ಕೋಸ್ಕರ, ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಎಲ್ಲೋ ಒಂದು ಕಡೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣ ಮರೆತಂತೆ ವರ್ತಿಸುತ್ತಾ ಇರುವುದು ಸಹ ಸಮರ್ಥನೀಯವಲ್ಲದ ಸಂಗತಿ . ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಯುವಕ ದೀಪಕ್ ಹತ್ಯೆಯನ್ನೇ ತೆಗೆದುಕೊಳ್ಳಿ, ಇಲ್ಲಿ ಕೊಲೆ ಮಾಡಿರುವವರಿಗೆ ಶಿಕ್ಷೆ ಆಗಲೇಬೇಕು, ಆ ಶಿಕ್ಷೆಯು ಮುಂದೆ ಇಂಥಾ ಘಟನೆಗಳಿಗೆ ಕೈ ಹಾಕಲು ಯೋಚಿಸುವಂತೆ ಮಾಡಿ ತಪ್ಪು ನಿರ್ಧಾರ ತೆಗೆದುಕೊಳ್ಳದಂತೆ ಬದಲಾಯಿಸುವ ಮಾರ್ಗಸೂಚಿ ಆಗಬೇಕು. ಇದರ ಜೊತೆಗೆ ಧರ್ಮದ ಅಮಲು ಕರುನಾಡ ಯುವಕರ ತಲೆಗೆ ಅಮರಿಕೊಳ್ಳದಂತೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಆದರೆ ಇಲ್ಲಿ ಆಗುತ್ತಿರುವುದು ಸಂಪೂರ್ಣ ವಿರುದ್ಧ ಸಂಗತಿ. ಇಂದು ಒಬ್ಬ ಹಿಂದೂ ಸಂಘಟನೆಯ ಮುಖಂಡ ಬಹಿರಂಗವಾಗಿ “ಹಿಂದೂ ಸಮಾಜದವರು ಹೇಡಿಗಳಲ್ಲ,ಧರ್ಮ ಯುದ್ಧಕ್ಕೆ ರಾಮ ಪ್ರೇರಣೆ” ಎಂಬ ಹೇಳಿಕೆ ನೀಡುತ್ತಾ ಇರುವ ಪರಿಸ್ಥಿತಿಯನ್ನು ಇನ್ನಷ್ಟು ಪ್ರಕೋಪಕ್ಕೆ ತಳ್ಳುವಂತ ಪ್ರಯತ್ನ ನಡೆಸುವುದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ. ಹಿಂದೂ ಸಮಾಜವು ಆ ವ್ಯಕ್ತಿಯನ್ನು ಅಧಿಕೃತ ವಕ್ತಾರ ಎಂದು ಒಪ್ಪಿಕೊಂಡಿದೆಯೇ?, ಹಿಂದೂ ಸಮಾಜಕ್ಕೆ ಆವರೇನು ಮಾರ್ಗದರ್ಶಕರೇ? , ಹಿರಿಯರು, ಮಾರ್ಗದರ್ಶಕರು ಎಂದಿಟ್ಟುಕೊಳ್ಳೋಣ, ಹಾಗಿದ್ದಲ್ಲಿ ತಮ್ಮದೇ ಹಿಂದೂ ಧರ್ಮದ ಮುಗ್ದ ಬಾಲೆ ದಾನಮ್ಮಳ ಅತ್ಯಾಚಾರದ ಸಾವಿನಲ್ಲಿ ಈ ಮಾರ್ಗದರ್ಶಕ ಎಲ್ಲಿ ಕಾಣೆಯಾಗಿದ್ದರು, ಇವರ ಸಂಘಟನೆ ಉಸಿರೇ ಬಿಚ್ಚದೆ ಮೌನ ವಹಿಸಿದ್ದು ಯಾಕೆ, ದಾನಮ್ಮ ಹಿಂದೂ ಅಲ್ಲವೇ, ದಾನಮ್ಮಳ ಸಾವು ಆದಾಗ ಹೇಡಿ ಆಗಿದ್ದು ಯಾರು. ಇಂಥ ವೈರುಧ್ಯ ಒಂದು ಕಡೆ ತಮ್ಮ ನ್ಯಾಯ ಇಟ್ಟುಕೊಂಡು ಕುಳಿತಾಗ ಮಾತ್ರ ಸಾಧ್ಯ. ಇದು ಸಮಾಜಕ್ಕೆ ಯಾವ ರೀತಿಯಲ್ಲೂ ಆರೋಗ್ಯಕರವಲ್ಲ.

ಇನ್ನು ರಾಜಕೀಯ ಪಕ್ಷಗಳಷ್ಟು ಹೊಣೆಗೇಡಿತನ ಈ ವಿಷಯದಲ್ಲಿ ಇನ್ನ್ಯಾರು ಮಾಡುತ್ತಿಲ್ಲ. ಯಾವುದೇ ಹತ್ಯೆ ಆದ ಕೂಡಲೇ, ಆ ಸಾವಿನ ಮನೆಯಲ್ಲಿ ತಮ್ಮ ಬಾವುಟ ಹಾರಿಸಿ, ತಮ್ಮ ಓಲೆ ಹಚ್ಚಿ ವೋಟ್ ಎಂಬ ಅಡುಗೆ ತಯಾರಿಸಲು ಧಾವಿಸಿಬಿಡುತ್ತಾರೆ. ಹತ್ಯೆಯ ಹಿಂದಿನ ಕಾರಣ ಏನೇ ಇರಲಿ, ಇವರು ಅದಕ್ಕೆ ತೊಡಿಸುವ ಉಡುಗೆ -ಕೋಮುದ್ವೇಷ ಎಂಬ ನಿಲುವಂಗಿ. ಧರ್ಮಾಧಾರಿತ ರಾಜಕಾರಣ ಯಾವ ಸ್ಥಿತಿಗೆ ತಲುಪಿದೆ ಎಂದರೆ ಸಾವಿನ ಸೂತಕದ ಮನೆಯವರು ಸಹ ತಮ್ಮ ಮನೆ ಮಗನ ಕೊನೆಯ ಕ್ರಿಯೆ ನಡೆಸಲು ಹರಸಾಹಸ ಪಡಬೇಕಾಗಿದೆ. ಕೊಲೆಯ ಹಿಂದಿನ ರಹಸ್ಯ ಬೇಧಿಸ ಹೊರಟಾಗ ಬೇರೆ ಕಾರಣಗಳು ಸಾಕ್ಷಿ ಸಮೇತ ರುಜುವಾತಾದರೂ, ಮುಂಚೆ ವೋಟಿನ ಅಡಿಗೆ ಬೇಯಿಸುವಾಗ ಇದ್ದ ಧರ್ಮಾಧಾರಿತ ಹತ್ಯೆ ಎಂಬ ವಾಸನೆ ಹೋಗುವುದಿಲ್ಲ.ಅದು ದ್ವೇಷದ ವಾತಾವರಣಕ್ಕೆ,ಇನ್ನಷ್ಟು ಮಾರಣಾತಿಕ ಘಟನೆಗಳಿಗೆ ಸಾಕ್ಷಿ ಆಗಿರುತ್ತದೆ. ರಾಜಕೀಯ ಪಕ್ಷಗಳನ್ನು ಇಂತಹ ಘಟನೆಗಳಿಂದ ಹೊರಗಿಟ್ಟಲ್ಲಿ, ನಮ್ಮ ಕರಾವಳಿ ಕೆಲವೇ ವರ್ಷಗಳಲ್ಲಿ ತನ್ನ ಹಿಂದಿನ ಸಹಬಾಳ್ವೆಯ ಸಹಜ ಪರಿಸ್ಥಿತಿಗೆ ಬರುವುದರಲ್ಲಿ ಯಾವುದೇ ಸಂಶಯ ಇಲ್ಲ, ಕರಾವಳಿಯಲ್ಲಿ ಬದುಕು ನಡೆಸುತ್ತ ಇರುವ ಜನರಿಗೂ ಬೇಕಾಗಿರುವುದು ಆ ಸಹಬಾಳ್ವೆ, ಸಮನ್ವಯತೆಯ ಜೀವನವೇ ಹೊರತು, ಹಿಂದೂ ಮುಸ್ಲಿಮರ ನಡುವೆ ನಿತ್ಯ ಜಗಳವನ್ನೋ, ಸಂಘರ್ಷವನ್ನೋ, ಯಾವ ಹಿಂದೂ,ಮುಸಲ್ಮಾನ, ಕ್ರೈಸ್ತನು ಸಹ ಒಪ್ಪುವುದಿಲ್ಲ. ಹತ್ಯೆ ಯಾರದೇ ಆಗಿರಲಿ ತಪ್ಪಿತಸ್ಥ ಯಾವುದೇ ಧರ್ಮಕ್ಕೆ ಸೇರಿರಲಿ,ನ್ಯಾಯಯುತ ತನಿಖೆ ನಡೆದು ಶಿಕ್ಷೆ ಆಗಬೇಕೆಂದರೆ ಅದರಲ್ಲಿ ರಾಜಕೀಯ ಸಂಘಟನೆಗಳು ಮಧ್ಯ ಪ್ರವೇಶ ಮಾಡದಂತೆ ತಡೆಯುವ ಚಾಣಾಕ್ಷತನವನ್ನು ನಮ್ಮ ಸಮಾಜ ಅಭ್ಯಾಸ ಮಾಡಿಕೊಳ್ಳಬೇಕಿದೆ.

ಇದುವರೆಗೂ ಆದ ಎಲ್ಲ ಕೋಮು ಘರ್ಷಣೆಗಳಲ್ಲಿ ಯಾವ ರಾಜಕೀಯ ಸಂಘಟನೆಯ ಮಕ್ಕಳು, ಮೊಮ್ಮಕ್ಕಳು ಸಹ ಬಲಿಯಾಗಿಲ್ಲ. ಇಲ್ಲಿ ಬಲಿ ಆಗುತ್ತಾ ಇರುವುದು ದಿನ ನಿತ್ಯ ತಮ್ಮ ಜೀವನಕ್ಕೆ ಹೋರಾಟ ನಡೆಸುವ ಮುಗ್ದ, ಧರ್ಮಾಧಾರಿತ ಘರ್ಷಣೆಯ ವಿಷಕ್ಕೆ ಬಲಿಯಾದ ಅಮಾಯಕರ ಮನೆಯ ಮಕ್ಕಳು. ಈ ಸಾವುಗಳಿಗೆ ರಾಜಕೀಯ ಸಂಘಟನೆಗಳು ನ್ಯಾಯ ಕೊಡಲು ಸಾಧ್ಯವೇ.

ಇದೆಲ್ಲದರ ಮಧ್ಯೆ ಮಾಧ್ಯಮಗಳು ಸಹ ತಮ್ಮ ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಮಾಡಿಬಿಟ್ಟರೆ, ನಮ್ಮ ರಾಜ್ಯ ಕೋಮು ದಳ್ಳುರಿಯಲ್ಲಿ ಯಾವ ರಾಜಕೀಯ ಪಕ್ಷಗಳ, ಸಂಘಟನೆಗಳ ದಳ್ಳುರಿಯಲ್ಲೂ ಬೇಯುವುದಿಲ್ಲ. ನೇತಾಜಿ ಸುಭಾಸ್ ಚಂದ್ರ ಬೋಸ್ ಅಂದೇ ಒಂದು ಮಾತು ಹೇಳಿದ್ದರು, “ನೆನಪಿಡಿ, ಅನ್ಯಾಯ ಮತ್ತು ತಪ್ಪಿನೊಂದಿಗೆ, ತಪ್ಪತಸ್ಥರೊಂದಿಗೆ ರಾಜಿಯಾಗುವುದಕ್ಕಿಂತ ಮಹಾಪರಾಧ ಇನ್ನೊಂದಿಲ್ಲ” ಎಂದು, ತಪ್ಪು ಯಾವುದೇ ಧರ್ಮದ ಸಂಘಟನೆ ಮಾಡಲಿ ವಿರುದ್ಧ ದನಿ ಎತ್ತೋಣ. ಧರ್ಮಾಧಾರಿತ ರಾಜಕಾರಣವನ್ನು ಮೆಟ್ಟಿ ನಿಂತು ವಿರೋಧಿಸೋಣ. ಆಗ ಸಮನ್ವಯತೆಯು ಅಭಿವೃದ್ಧಿಗೆ ತಾನಾಗೇ ದಾರಿ ಮಾಡಿಕೊಡುತ್ತದೆ. ನಮಗೆ ಅವಶ್ಯಕವಾಗಿರುವುದು ನಾಡಿನ ಅಭಿವೃದ್ಧಿಯೇ ಹೊರತು ಕೋಮು ಸಂಘರ್ಷಗಳಲ್ಲ. ಕರ್ನಾಟಕ ಪಜ್ಞಾವಂತರ ನಾಡು, ಇದು ಯಾವುದೋ ಕೋಮು ದಳ್ಳುರಿಗೆ ಸಾಕ್ಷಿ ಆದ ಗುಜರಾತ್ ಅಥವಾ ಇನ್ನ್ಯಾವುದೋ ರಾಜ್ಯವಲ್ಲ.

ನಮ್ಮ ಕರುನಾಡು ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆಗೆ ಸಿದ್ಧವಾಗಿದೆ, ಇಂತಹ ಸಮಯದಲ್ಲಿ ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದಿರುವ ರಾಜಕೀಯ ಪಕ್ಷಗಳು ಯಾವ ತಂತ್ರ ಹೂಡಲು ಸಹ ಸಿದ್ಧವಾಗಿವೆ. ಈ ವೇಳೆ ನಡೆಯುವ ಎಲ್ಲ ಆಗುಹೋಗುಗಳನ್ನು ಪ್ರಾಜ್ಞರಾಗಿ ಯೋಚಿಸಿ, ತಮ್ಮ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯ ಜವಾಬ್ದಾರಿ ಶಾಂತಿಯ ನಾಡಿನ ಜನತೆಯ ಮೇಲಿದೆ. ಯುವಕರ ಮೇಲೆ ಈ ಜವಾಬ್ದಾರಿ ತುಸು ಹೆಚ್ಚಿದೆ, ಪ್ರಜ್ಞಾವಂತರಾಗೋಣ.

– ಮನೋಜ್.ಹೆಚ್.ಆರ್
ಸಾಮಾಜಿಕ ಚಿಂತಕರು

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *