Breaking News
Home / ಇತ್ತೀಚಿನ ಸುದ್ದಿಗಳು / ನಮೋ ಕರ್ನಾಟಕವೂ, ಮತ್ತೊಮ್ಮೆ ಸಿದ್ದರಾಮಯ್ಯ ಎನ್ನುವ ಘೋಷವೂ..ಸಾಮಾಜಿಕ ಮಾಧ್ಯಮಗಳಲ್ಲಿನ ರಾಜಕೀಯ ವಿಶ್ಲೇಷಣೆ..!

ನಮೋ ಕರ್ನಾಟಕವೂ, ಮತ್ತೊಮ್ಮೆ ಸಿದ್ದರಾಮಯ್ಯ ಎನ್ನುವ ಘೋಷವೂ..ಸಾಮಾಜಿಕ ಮಾಧ್ಯಮಗಳಲ್ಲಿನ ರಾಜಕೀಯ ವಿಶ್ಲೇಷಣೆ..!

ಲೇಖಕರು – ಶೇಷಗಿರಿ ಆಚಾರ್
ಇನ್ನು ಮೂರು ತಿಂಗಳಲ್ಲಿ ಎದುರಾಗುವ ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಹಿಂದಿನ ಎಲ್ಲಾ ಚುನಾವಣೆಗಳನ್ನು ಮೀರಿಸುವ ಮಟ್ಟಕ್ಕೆ ಏರುತ್ತಾ ಇರುವ ಚಿತ್ರಣ ನಮ್ಮ ಮುಂದಿದೆ. ಎಲ್ಲ ಪಕ್ಷಗಳ ರಾಷ್ಟ್ರೀಯ ನಾಯಕರು ಕರ್ನಾಟಕದತ್ತ ತಮ್ಮ ಸಂಪೂರ್ಣ ಚಿತ್ತವನ್ನು ಹರಿಸಿ ತಮ್ಮ ಗೆಲುವಿನ ಲೆಕ್ಕಾಚಾರದ ಯೋಜನೆಗಳನ್ನು ಹೆಣೆಯುವುದರಲ್ಲಿ ನಿರತರಾಗಿದ್ದಾರೆ. ಮೊದಲು ಚುನಾವಣೆ ಎಂದಾಗ ನೆನಪಾಗುವುದು,ಆಟೊಗಳಲ್ಲಿ ಕಟ್ಟಿದ್ದ ಧ್ವನಿವರ್ಧಕಗಳಲ್ಲಿ ಮೊಳಗುತ್ತಿದ್ದ ಘೋಷಣೆಗಳು, ಗೋಡೆ ಬರಹಗಳು ಹಾಗು ಕರಪತ್ರಗಳು. ಕಾಲ ಬದಲಾದಂತೆ ಪ್ರಪಂಚವನ್ನು ಸಾಮಾಜಿಕ ಮಾಧ್ಯಮಗಳು ಆಳುತ್ತಿವೆ.

ಚುನಾವಣಾ ರಾಜಕೀಯ ಸಹ 2014 ರ ಲೋಕಸಭಾ ಚುನಾವಣೆಯಲ್ಲಿ ಎಂದೂ ಕಾಣದ ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ಸೃಷ್ಟಿಮಾಡಿತು. ಸಾಮಾಜಿಕ ಮಾಧ್ಯಮವನ್ನು ಹೀಗೂ ಉಪಯೋಗ ಮಾಡಿಕೊಳ್ಳಬಹುದು ಎಂದು ಬೇರೆ ಪಕ್ಷಗಳು ದೃಷ್ಟಿ ಹಾಯಿಸುವ ಮೊದಲೇ ಬಿಜೆಪಿ ತನ್ನ ಕೆಲಸವನ್ನು ವ್ಯವಸ್ಥಿತವಾಗಿ ಲೋಕಸಭಾ ಚುನಾವಣೆಗಿಂತ ಹಿಂದೆಯೇ ಮಾಡಿ ಮುಂಚೂಣಿಯಲ್ಲಿತ್ತು. ಯುವಕರ ಸಂಪೂರ್ಣ ಗಮನ ಮೋದಿ ಎಂಬುವ ಏಕವ್ಯಕ್ತಿಯ ಮೇಲೆ ಕೇಂದ್ರೀಕೃತವಾಗುವಂತೆ ಆ ಸಾಮಾಜಿಕ ತಾಣಗಳು ರೂಪಿಸುವಲ್ಲಿ ಯಶಸ್ವೀಯಾಗಿದ್ದವು. ಈ ಚಾಣಕ್ಷ ತಂತ್ರ ಬಳಸಿಕೊಂಡು ಬಿಜೆಪಿ ದೇಶದ ಚುಕ್ಕಾಣಿ ಹಿಡಿದದ್ದು ನಮ್ಮ ಮುಂದಿರುವ ಸತ್ಯ.

ಸಾಮಾಜಿಕ ಜಾಲತಾಣಗಳು ಕರ್ನಾಟಕದ ರಾಜ್ಯ ಚುನಾವಣಾ ರಾಜಕೀಯಕ್ಕೆ ಹೊಸತು.ಆದರೂ ಅದನ್ನು ಬಳಸಿಕೊಳ್ಳುವಲ್ಲಿ ಯಾವ ಪಕ್ಷವು ಹಿಂದೆ ಬಿದ್ದಿಲ್ಲ. 2014ರಲ್ಲಿ ‘ನಮೋ’ (ನರೇಂದ್ರ ಮೋದಿ) ಎನ್ನುವ ಘೋಷ ಎಲ್ಲೆಡೆ ಮೊಳಗಿತ್ತು, ನಮೋ ಎನ್ನುವ ಧ್ವನಿ ಹೊರಡಿಸಿದ್ದು, ನಮೋ ಬ್ರಿಗೇಡ್ ಎನ್ನುವ ಯುವ ಸಂಘಟನೆ ಹುಟ್ಟು ಹಾಕಿದ್ದು ಇದೆ ಸಾಮಾಜಿಕ ಜಾಲತಾಣಗಳು. ಅದೇ ರೀತಿ ಇದೀಗ ಕರ್ನಾಟಕದಲ್ಲಿ ಸಹ ಅದೇ ರೀತಿಯ ಹಲವು ಘೋಷಗಳು ಮೊಳಗುತ್ತಿವೆ, ಇಂಥಾ ಒಂದು ತಂತ್ರ ಪರಿಚಯಿಸಿದ ಬಿಜೆಪಿ, ಕರ್ನಾಟಕದ ಮಟ್ಟಿಗೆ ತನ್ನ ಎದುರಾಳಿ ಕಾಂಗ್ರೆಸ್ ಪಕ್ಷಕ್ಕಿಂತ ಹಿಂದೆ ಬಿದ್ದಿದೆ ಎಂದೆನಿಸುತ್ತದೆ. ಕಳೆದ ವರ್ಷದಲ್ಲಿ ಹೆಚ್ಚಾಗಿ ಕಂಡು ಬಂದ ಒಂದು ಘೋಷ ಮತ್ತೊಮ್ಮೆ ಸಿದ್ದರಾಮಯ್ಯ. ಇದು ಸಿದ್ದರಾಮಯ್ಯನವರ ಪಕ್ಷ ಗುಪ್ತವಾಗಿ ಆರಂಭ ಮಾಡಿದ್ದೋ , ತಾನಾಗೇ ಹುಟ್ಟು ಪಡೆದುಕೊಂಡ ಧ್ವನಿಯೋ ತಿಳಿದಿಲ್ಲ, ಆದರೆ ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ನೇರ ಜನಾಭಿಪ್ರಾಯ ರೂಪಿಸುವಲ್ಲಿ ಮೊದಲ ಹೆಜ್ಜೆ ಸಿದ್ದರಾಮಯ್ಯನವರ ಪರವಾಗಿತ್ತು ಎಂದು ಹೇಳಬಹುದು.

ಬಿಜೆಪಿಗಿಂತಲೂ ಮುಂಚೆಯೇ ಕಾಂಗ್ರೆಸ್ ಚುನಾವಣಾ ರಣಕಣಕ್ಕೆ ಇಳಿದಿರುವುದು ಇದರಿಂದ ಸ್ಪಷ್ಟ, ಹೇಗೆ ಲೋಕಸಭಾ ಚುನಾವಣೆಯಲ್ಲಿ ದೇಶದ ಬಹುಪಾಲು ಯುವಕರು ಮೋದಿಯ ಪರವಾಗಿ ನಿಂತು ಹೆಚ್ಚಿನ ಜನಮತಕ್ಕೆ ಸಾಕ್ಷಿಯಾದರೋ ಅದೇ ರೀತಿ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಬೆನ್ನಿಗೆ ದೊಡ್ಡ ಯುವ ಪಡೆ ನಿಂತಿದೆ ಎಂದು ಭಾಸವಾಗುತ್ತಿದೆ. ಇಂದು ಹೆಚ್ಚು ಪ್ರಚಲಿತವಾಗಿರುವ ಮತ್ತೊಮ್ಮೆ ಸಿದ್ದರಾಮಯ್ಯ ಎನ್ನುವ ಘೋಷ ವಾಕ್ಯ ಅದನ್ನು ದೃಡೀಕರಿಸುತ್ತದೆ.

ಹಾಗಿದ್ದಲ್ಲಿ ಬಿಜೆಪಿಯ ಸಾಮಾಜಿಕ ಜಾಲತಾಣಗಳು ಫೇಲ್ ಆಗಿವೆಯೇ, ಖಂಡಿತವಾಗಿಯೂ ಇಲ್ಲ, ಅದು ಅನುಭವಿ ಪಡೆ,ನಮೋ ಕರುನಾಡು ಎನ್ನುವ ಘೋಷ ಸಹ ಜನಾಭಿಪ್ರಾಯ ರೂಪಿಸುತ್ತಿದೆ, ಆದರೂ ಒಂದು ಮಟ್ಟಿಗಿನ ಹಿನ್ನೆಡೆ ಉಂಟಾಗಲು ಕಾರಣಗಳು ಬಿಜೆಪಿಯ ಬಳಿ ಸಾಕಷ್ಟಿವೆ. ಅವು ಬಿಜೆಪಿಯ ದೌರ್ಬಲ್ಯಗಳು ಸಹ.ಕರ್ನಾಟಕದಲ್ಲಿನ ಐದು ವರ್ಷಗಳ ಬಿಜೆಪಿ ಆಡಳಿತಕ್ಕೆ ಎಂಥಾ ಅಪ್ರತಿಮ ವಾಗ್ಮಿಯಾದರು ಸಹ ಅಷ್ಟು ಸುಲಭವಾಗಿ ಸಮರ್ಥನೆ ನೀಡಲು ಸಾಧ್ಯವಾಗುವುದಿಲ್ಲ, ಅವೆಲ್ಲ ಈಗಿನ ಮುಖ್ಯಮಂತ್ರಿ ಅಭ್ಯರ್ಥಿ ಯಡ್ಯೂರಪ್ಪನವರ ನೇರಕ್ಕೆ ಗುರಿ ಮಾಡಿಕೊಂಡಿರುವ ಆರೋಪಗಳು. ಇನ್ನು ಉಳಿದದ್ದು ಮೋದಿಯವರ ಮೂರು ವರ್ಷಗಳ ಆಡಳಿತ, ಮೂರು ವರ್ಷಗಳ ಆಡಳಿತದಲ್ಲಿ ಸಮರ್ಥನೆ ಮಾಡಿಕೊಳ್ಳುವಂಥ, ಜನಮನ್ನಣೆಗಳಿಸುವಂಥ ಯೋಜನೆಗಳು ತೀರಾ ಕಡಿಮೆ. ಅಲ್ಲಿ ಸಹ ಹೇಳಿಕೊಳ್ಳಲು ಸಾಧ್ಯವಾಗದೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಜನಮತಗಳಿಸುವಲ್ಲಿ ಬಿಜೆಪಿ ಹಿಂದೆ ಬಿದ್ದಿತು.

ಆದರೆ ಕಾಂಗ್ರೆಸ್ ತನ್ನ ಆಡಳಿತದ ಕಾರ್ಯಕ್ರಮಗಳು ಹಾಗು ಯೋಜನೆಗಳನ್ನು ಜನರಿಗೆ ತಲುಪಿಸುವುದರಲ್ಲಿ ತಕ್ಕ ಮಟ್ಟಿಗೆ ಯಶಸ್ವೀ ಆಗಿದೆ. ಅದಕ್ಕೆ ಸಿದ್ದರಾಮಯ್ಯರಂಥ ಸಮರ್ಥನೆ ಮಾಡಿಕೊಳ್ಳಬಲ್ಲ ವ್ಯಕ್ತಿತ್ವ ಬಂಡವಾಳ. ವಿರೋಧಿಗಳಿಗೆ ನಿದ್ದೆ, ಹುಂಬತನ,ಸರ್ಕಾರಿ ಅಧಿಕಾರಿಗಳ ವಿರೋಧಿ ಇಂಥಾ ನಿರ್ಲಕ್ಷಿಸಬಹುದಾದ ಆರೋಪಗಳನ್ನು ಕೊಟ್ಟ ಸಿದ್ದರಾಮಯ್ಯನವರ ಆಡಳಿತ, ಸಾಮಾಜಿಕ ಜಾಲತಾಣಗಳಲ್ಲೂ ಗೆಲ್ಲಲು ಸಹಕಾರಿಯಾಗಿದೆ. ತನ್ನ ಸಾಮಾಜಿಕ ಮಾಧ್ಯಮ ವಿಭಾಗವನ್ನು ಪ್ರತಿ ಜಿಲ್ಲೆಯಲ್ಲೂ ದೃಢವಾಗಿ ಕಟ್ಟಿದ ಕಾಂಗ್ರೆಸ್ ಈಗ ಒಂದು ಹೆಜ್ಜೆ ಮುಂದಿದೆ. ಮೋದಿಯ ಹಿಂದೆ ನಿಂತಿದ್ದ ಯುವಪಡೆಯನ್ನು ಕರ್ನಾಟಕದಲ್ಲಿ ಸಿದ್ದರಾಮಯ್ಯ ಜೊತೆ ನಿಲ್ಲುವಂತೆ ಮಾಡುವಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಘೋಷ ಬಹುಪಾಲು ಯಶಸ್ಸು ಕಂಡಿದೆ ಎಂದೆನಿಸುತ್ತದೆ. ನಮೋ ಕರುನಾಡು ಸಹ ನಿರ್ಲಕ್ಷ್ಯ ವಹಿಸುವ ಸಂಗತಿಯಲ್ಲ, ಇದೆಲ್ಲದರ ನಡುವೆ ರಾಜ್ಯದ ಸಮಗ್ರ ರಾಜಕಾರಣದಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಭಾವ ಎಷ್ಟಿರುತ್ತದೆ ಕಾದು ನೋಡಬೇಕಾಗಿದೆ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *