Breaking News
Home / ಇತ್ತೀಚಿನ ಸುದ್ದಿಗಳು / ರಂಗೇರುತ್ತಿದೆ ಕೋಲಾರ ವಿಧಾನಸಭಾ ರಣಕಣ – ವರ್ತೂರು ವಿರುದ್ಧ ಸಿದ್ದು ದಿಟ್ಟ ಪಟ್ಟು ..!

ರಂಗೇರುತ್ತಿದೆ ಕೋಲಾರ ವಿಧಾನಸಭಾ ರಣಕಣ – ವರ್ತೂರು ವಿರುದ್ಧ ಸಿದ್ದು ದಿಟ್ಟ ಪಟ್ಟು ..!

ಸುಧಾಕರ ಆಚಾರ್ಯ 
  ರಾಜಕೀಯ ವಿಶ್ಲೇಷಕರು.

ಇನ್ನೇನು ಚುನಾವಣೆಯ ದಿನ ನಿಗದಿಯಾಗುವುದಷ್ಟೇ ಬಾಕಿ, ರಾಷ್ಟಮಟ್ಟದ ಎಲ್ಲ ರಾಜಕೀಯ ನಾಯಕರ ಚಿತ್ತ ಸಂಪೂರ್ಣ ಕರ್ನಾಟಕದತ್ತ ನೆಟ್ಟಿದೆ. ಕರ್ನಾಟಕ ರಾಷ್ಟ್ರೀಯ ಪಕ್ಷಗಳ ಬಲಾಬಲಕ್ಕೆ ಸಾಕ್ಷಿಯಾಗಲು ವೇದಿಕೆ ಸಜ್ಜುಗೊಂಡಿದೆ. ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದ ಹುರಿಯಾಳುಗಳು ತಮ್ಮ ಪೂರ್ವ ತಾಲೀಮಿನಲ್ಲಿ ತೊಡಗಿಕೊಂಡಿರುವ ಕಾಲ ಇದು. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು. ಅಭ್ಯರ್ಥಿಯಾಗಲು ಒಳಾಂಗಣದಲ್ಲೇ ಭಾರಿ ಪೈಪೋಟಿ ಪ್ರತಿ ಕ್ಷೇತ್ರದಲ್ಲಿ ನಡೆಯುತ್ತಿದೆ. ಬೆಂಗಳೂರು ಎಲ್ಲರ ಕೇಂದ್ರವಾಗಿದೆ.

ಬೆಂಗಳೂರಿನ ಸನಿಹದಲ್ಲೇ ಇದ್ದರು ತನ್ನ ಸ್ವಂತಿಕೆಯನ್ನು ಬಿಟ್ಟುಕೊಡದ ಜಿಲ್ಲೆ ಕೋಲಾರ. ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗು ವರ್ತೂರ್ ಪ್ರಕಾಶ್ ಅವರ ಹೊಸ ಪಕ್ಷ ‘ನಮ್ಮ ಕಾಂಗ್ರೆಸ್’ ತನ್ನದೇ ಆದ ದಾಳ ಪ್ರಯೋಗಿಸುತ್ತಿವೆ. ಕೆ ಎಚ್ ಮುನಿಯಪ್ಪ, ರಮೇಶ್ ಕುಮಾರ್, ವಿ ಸುದರ್ಶನ್ ಮುಂತಾದ ನಾಯಕರನ್ನು ಜಿಲ್ಲೆಯಲ್ಲಿ ಒಳಗೊಂಡಿರುವ ಕಾಂಗ್ರೆಸ್ ಪಕ್ಷ ತನ್ನ ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದೆ. ಇನ್ನು ಜೆಡಿಎಸ್ ಪಕ್ಷಕ್ಕೆ ಸಚಿವ ಶ್ರೀನಿವಾಸಗೌಡ ಹಾಗು ಪರಿಷತ್ ಸದಸ್ಯ ಮನೋಹರ್ ಹುರಿಯಾಳುಗಳು. ಬಿಜೆಪಿಗೆ ಹೇಳಿಕೊಳ್ಳುವಂಥಾ ಗಟ್ಟಿ ನೆಲೆ ಕೋಲಾರ ಇಂದಿಗೂ ಆಗಿಲ್ಲ.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೇರುವ ತನ್ನ ಪ್ರಯತ್ನಗಳು ವಿಫಲವಾದಾಗ, ಸಿಡಿದ್ದೆದ್ದು ನಮ್ಮ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಿ ಸನ್ನದ್ಧವಾಗಿರುವ ವರ್ತೂರ್ ಪ್ರಕಾಶ್ ಎರಡು ಬಾರಿ ಆರಿಸಿ ಬಂದಿದ್ದಾರೆ. ಘಟಾನುಘಟಿ ನಾಯಕರನ್ನು ತನ್ನ ಮಡಿಲಲ್ಲಿ ಹೊಂದಿರುವ ಕಾಂಗ್ರೆಸ್ ಶತಾಯಗತಾಯ ಕೋಲಾರ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಂತೆ ಭಾಸವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ನೇರವಾಗಿ ತನ್ನ ಮಾತಿನಿಂದ ತಿವಿಯುತ್ತಿರುವ ವರ್ತೂರ್ ಪ್ರಕಾಶ್ ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ತೊಡಗಿದೆ. ಆ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ವಿ.ಸುದರ್ಶನ್, ಗೋಪಾಲ ಕೃಷ್ಣ, ಜಮೀರ್ ಪಾಶ ಅವರ ಹೆಸರುಗಳು ಕೇಳಿಬರುತ್ತಿವೆ. ಅದರೊಂದಿಗೆ ತಮ್ಮ ವಿರುದ್ಧ ಸೆಟೆದು ನಿಂತಿರುವ ವರ್ತೂರು ಪ್ರಕಾಶ್ ಅವರನ್ನು ಸೋಲಿಸಲು ಚಾಣಾಕ್ಷ ತಂತ್ರ ಹೆಣೆಯುತ್ತಿರುವ, ಸಿದ್ದರಾಮಯ್ಯ ತಮ್ಮ ತಂತ್ರದ ಭಾಗವಾಗಿ ನಿಲ್ಲಿಸಲು ಬಯಸಿರುವ ವ್ಯಕ್ತಿ, ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಮೂಲತಃ ಕೋಲಾರ ಮೂಲದ ಚಿಕ್ಕರಾಯಪ್ಪ ಎನ್ನುವ ಗುಸುಗುಸು ವಿಧಾನಸೌಧದ ಪಡಸಾಲೆಯಲ್ಲಿ ಕೇಳಿಬರುತ್ತಿದೆ.


ವಿ.ಸುದರ್ಶನ್ ಅಭ್ಯರ್ಥಿಯಾದರೆ ಪಕ್ಷಕ್ಕೆ ಲಾಭ ಆಗುವುದು ಎನ್ನುವ ಮಾತಿದ್ದರು ಸಹ ಗೆಲುವಿಗೆ ಬೇಕಾದ ಚಾಕಚಕ್ಯತೆ ಹಾಗು ಚುನಾವಣಾ ರಾಜಕೀಯದ ವರಸೆಗೆ ಹೊಂದಿಕೊಳ್ಳುವುದು ಕಷ್ಟ ಎನ್ನುತ್ತದೆ ಕೋಲಾರ ಕಾಂಗ್ರೆಸ್ ಒಂದು ಬಣ. ಇನ್ನು ಗೋಪಾಲ ಕೃಷ್ಣ, ಜಮೀರ್ ಪಾಶ ಅವರು ವರ್ತೂರು ಪ್ರಕಾಶ್ ವಿರುದ್ಧ ನಿಂತರು ಗಣನೀಯ ಪ್ರಮಾಣದಲ್ಲಿ ಮತ ಗಳಿಕೆ ಕಷ್ಟ ಎನ್ನುತ್ತದೆ ಇನ್ನೊಂದು ಬಣ. ಇನ್ನು ಚಿಕ್ಕರಾಯಪ್ಪ ಅವರ ಪರ ಸಿದ್ದರಾಮಯ್ಯನವರು ನಿಂತರೆ ವರ್ತೂರು ಪ್ರಕಾಶ್ ಅವರ ವಿರುದ್ಧ ಯೋಜನೆ ಹೆಣೆಯಲು ಸಹಕಾರಿಯಾಗುತ್ತದೆ ಎನ್ನುವ ಮಾತುಗಳಿವೆ. ಕುರುಬ ಸಮುದಾಯದ ಮತಗಳನ್ನು ಗಣನೀಯವಾಗಿ ಪಡೆಯಲು ಸಹ ತಳಹದಿ ಆಗುತ್ತದೆ ಎನ್ನುವುದು ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು.

ಚಿಕ್ಕರಾಯಪ್ಪನವರ ಮೇಲೆ ಚಿಕ್ಕ ಪುಟ್ಟ ಆಪಾದನೆಗಳು ಆಗ ಬಂದಿದ್ದವು, ಅದು ಒಂದು ವಿಷಯ ಎಂದು ಅನಿಸುವುದಿಲ್ಲ, ಆ ವಿಷಯದಲ್ಲಿ ಚಿಕ್ಕರಾಯಪ್ಪ ಆರೋಪಮುಕ್ತರಾದದ್ದು ಈಗ ಇತಿಹಾಸ, ಅಂಥಾ ಸಿದ್ದರಾಮಯ್ಯನಂಥ ಸಿದ್ದರಾಮಯ್ಯನವರ ಮೇಲೆಯ ಆರೋಪ ಹೊರಿಸುವ ಈ ಕಾಲದಲ್ಲಿ, ಅವರ ಆಪ್ತ ವಲಯದ ವ್ಯಕ್ತಿಯ ಮೇಲೆ ಆರೋಪ ಬರುವುದು ಸಹಜ ಹಾಗೂ ಒಂದು ರಾಜಕೀಯ ತಂತ್ರ, ಅದನ್ನು ಚಿಕ್ಕರಾಯಪ್ಪ ಯಶಸ್ವಿಯಾಗಿ ಬೇಧಿಸಿ ಆರೋಪ ಮುಕ್ತರಾಗಿ ಆಗಿದೆ, ಓಡುವ ಕುದುರೆ ಗೆಲ್ಲುತ್ತದೆ. ಸದ್ಯಕ್ಕೆ ಇವರೇ ಓಡುತ್ತಿರುವ ಕುದುರೆ ಅನ್ನುವುದು ಕಾಣದೇ ಇರುವ ಹಾಗೂ ಚುನಾವಣಾ ರಾಜಕೀಯದ ಸತ್ಯ.

ತಮ್ಮ ಸಮಾಜದ ಅಗ್ರಗಣ್ಯ ನಾಯಕ ಸಿದ್ದರಾಮಯ್ಯ ಅವರನ್ನು ಅವಮಾನ ಮಾಡುತ್ತಿರುವುದರಿಂದ ಅವರದೇ ಕುರುಬ ಸಮುದಾಯದ ಮತದಾರರರು ವರ್ತೂರು ಪ್ರಕಾಶ್ ಮೇಲೆ ಸಿಟ್ಟಾಗಿದ್ದಾರೆ ಎನ್ನುವುದಂತೂ ದಿಟ. ಈ ಸಮುದಾಯ ನಿರ್ಣಾಯಕ ಪಾತ್ರ ವಹಿಸುವುದರಿಂದ,ಮತಗಳನ್ನು  ಸೆಳೆಯಲು ಅದೇ ಸಮುದಾಯದ ಅಭ್ಯರ್ಥಿ ಕಣಕ್ಕೆ ಇಳಿದರೆ ಕೋಲಾರದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಬಹುದು. ಇನ್ನು ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಸಹ ಹಲ ವ್ಯಕ್ತಿಗತ ಏಕಸ್ವಾಮ್ಯತ್ವದ ಕಾರಣಗಳಿಗಾಗಿ ವರ್ತೂರು ಪ್ರಕಾಶರಿಂದ ದೂರ ಸರಿದಿದ್ದಾರೆ.

ಇನ್ನು ಜೆಡಿಎಸ್ ಎರಡು ಬಣಗಳ ನಡುವೆ ಕಿತ್ತಾಟದಲ್ಲಿ ತೊಡಗಿದೆ ಎನ್ನುವ ಸುದ್ದಿ ಹರಡಿದೆ. ಮಾಜಿ ಸಚಿವ ಶ್ರೀನಿವಾಸ್ ಗೌಡ ಹಾಗು ಮನೋಹರ್ ಅವರ ನಡುವೆ ಟಿಕೆಟ್ಗಾಗಿ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಪ್ರಧಾನಿ ದೇವೇಗೌಡರ ಬಳಿ ಒಂದು ನಿಯೋಗ ಅನಿತಾ ಕುಮಾರಸ್ವಾಮಿ ಅವರನ್ನು ಕೋಲಾರದಲ್ಲಿ ಸಕ್ರಿಯಗೊಳಿಸಬೇಕು ಎಂದು ಸಹ ಮನವಿ ಮಾಡಿದೆ. ಜೆಡಿಎಸ್ ಪಕ್ಷದಲ್ಲಿ ಇನ್ನೂ ಯಾವುದು ನಿರ್ಧಾರವಾಗಿಲ್ಲ. ಇನ್ನೂ ಬಿಜೆಪಿಯ ನಡೆಗಳು ಗೊಂದಲಕಾರಿಯಾಗಿದ್ದು ಯಾವುದೇ ಅಂತಿಮ ನಿರ್ಣಯ ಆಗಿಲ್ಲ ಎಂದು ಕಂಡುಬರುತ್ತಿದೆ. ಪ್ರತಿಷ್ಠೆಯ ಈ ಕಣದಲ್ಲಿ  ವರ್ತೂರು ಪ್ರಕಾಶ್ ಅವರ ಅಸಮಾಧಾನಕ್ಕೆ ಗೆಲುವೋ, ಸಿದ್ದರಾಮಯ್ಯನವರು ಹಾಕುವ ಪಟ್ಟು ಗೆಲ್ಲುವುದೋ ಮತದಾರರ ಕೈಯಲ್ಲಿದೆ, ಕಾದು ನೋಡೋಣ.

– ಸುಧಾಕರ ಆಚಾರ್ಯ
ರಾಜಕೀಯ ವಿಶ್ಲೇಷಕರು.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *